ಕಟಕ್ : ಒರಿಸ್ಸ ರಾಜ್ಯದ ಒಂದು ನಗರ; ಜಿಲ್ಲೆ, ಮಹಾನದಿಯ ದಂಡೆಯ ಮೇಲೆ ಅದರ ಮುಖ್ಯ ಶಾಖೆಯಾದ ಕಟ್ಜೋರಿ ಕವಲೊಡೆಯುವಲ್ಲಿ, ಕೋಲ್ಕೊತದ ನೈರುತ್ಯಕ್ಕೆ 352 ಕಿಮೀ ಮತ್ತು ಸಮುದ್ರತೀರದಿಂದ 72 ಕಿಮೀ ದೂರದಲ್ಲಿ ಕಟಕ್ ನಗರವಿದೆ. ಉತ್ತರ ಅಕ್ಷಾಂಶ 20ಂ-26’ ಮತ್ತು ಪುರ್ವರೇಖಾಂಶ 850-56ದಿ ಗಳಲ್ಲಿದೆ. ಇದು ಆಗ್ನೇಯ ರೈಲ್ವೆಯ ಒಂದು ನಿಲ್ದಾಣ. ಚೆನ್ನೈ-ಹೌರಾ ರೈಲು ಮಾರ್ಗವೂ ಕೋಲ್ಕೊತ - ಚೆನ್ನೈ ರಾಷ್ಟ್ರೀಯ ಹೆದ್ದಾರಿಯೂ ಇದರ ಮೂಲಕ ಹಾದುಹೋಗುತ್ತವೆ.

ಕಟಕ್ ನಗರವನ್ನು ಸ್ಥಾಪಿಸಿದವನು ಮೂರನೆಯ ಅನಂಗಭೀಮದೇವ (1211-38), ಬಾರಾಬತಿ ಕೋಟೆಯನ್ನು ಇವನೇ ಕಟ್ಟಿಸಿದ, ಮಹಾನದಿ ಮತ್ತು ಕಟ್ಜೋರಿಗಳ ಪ್ರವಾಹದಿಂದ ನಗರವನ್ನು ರಕ್ಷಿಸುವ ಉದ್ದೇಶದಿಂದ ಇವುಗಳ ದಂಡೆಯ ಉದ್ದಕ್ಕೂ ಕಲ್ಕಟ್ಟಣೆ ನಿರ್ಮಿಸಿದವನೂ ಈತನೇ ಇರಬಹುದು. ಮುಕುಂದದೇವನ(1559-68) ಕಾಲಕ್ಕೆ ಬಾರಾಬತಿ ಕೋಟೆ ಒಂಬತ್ತು ಅಂತಸ್ತುಗಳ ರಚನೆಯಾಗಿ ಮಾರ್ಪಟ್ಟಿತು. 1568ರಲ್ಲಿ ಆಫ್ಘನರು ಕಟಕ್ ನಗರವನ್ನಾಕ್ರಮಿಸಿಕೊಂಡರು. ಈ ಆಕ್ರಮಣದೊಂದಿಗೆ ಒರಿಸ್ಸದಲ್ಲಿ ಹಿಂದೂ ರಾಜರ ಆಳ್ವಿಕೆಯೂ ಕೊನೆಗೊಂಡಿತು. 1590ರಲ್ಲಿ ಇದನ್ನು ಮೊಗಲರೂ 1751ರಲ್ಲಿ ಮರಾಠರೂ ವಶಪಡಿಸಿಕೊಂಡರು. ಮರಾಠರನ್ನು ಓಡಿಸಿ ಇದನ್ನು ಬ್ರಿಟಿಷರು ಆಕ್ರಮಿಸಿಕೊಂಡದ್ದು 1803ರಲ್ಲಿ, ಅವರ ಆಳ್ವಿಕೆಯ ಕಾಲದಲ್ಲಿ ಇದು ಒರಿಸ್ಸದ ರಾಜಧಾನಿಯಾಗಿತ್ತು.

ಕಟಕ್ ನಗರದಲ್ಲಿ ಅನೇಕ ಸ್ಮಾರಕಗಳಿವೆ. ಲಾಲ್ಬಾಗ್ ಅರಮನೆ (1633), ಜಾಮೀ ಮಸೀದಿ (1690), ಕದಾಂ ರಸೂಲ್ (1715) ಇವುಗಳೇ ಅಲ್ಲದೆ 18ನೆಯ ಶತಮಾನದಲ್ಲಿ ನಿರ್ಮಿತವಾದ ಅಮರೇಶ್ವರ ದೇವಸ್ಥಾನ ಮತ್ತು ಜೈನ ದೇವಾಲಯಗಳು ಮುಖ್ಯ, ಬ್ಯಾಪ್ಟಿಸ್ಟ್‌ ಚರ್ಚ್, ಕೆಥೊಲಿಕ್ ಚರ್ಚ್ ಇವು 19ನೆಯ ಶತಮಾನದಲ್ಲಿ ನಿರ್ಮಾಣವಾದವು.

ಕಟಕ್ ಉತ್ಕಲ ವಿಶ್ವವಿದ್ಯಾಲಯದ ಕೇಂದ್ರ. ರ್ಯಾವೆನ್ಷಾ ಕಾಲೇಜ್, ಕ್ರೈಸ್ಟ್‌ ಕಾಲೇಜ್, ಸ್ವೀವರ್ಟ್ ವಿಜ್ಞಾನ ಕಾಲೇಜ್, ಶೈಲಬಾಲಾ ಮಹಿಳಾ ಕಾಲೇಜ್, ಶ್ರೀರಾಮಚಂದ್ರಭಂಜ್ ವೈದ್ಯಕೀಯ ಕಾಲೇಜ್, ರಾಧಾನಾಥ್ ಟ್ರೇನಿಂಗ್ ಕಾಲೇಜ್ ಇವು ಉತ್ಕಲ ವಿಶ್ವವಿದ್ಯಾನಿಲಯದ ಕೆಲವು ಮುಖ್ಯ ಉಚ್ಚ ಶಿಕ್ಷಣ ಸಂಸ್ಥೆಗಳು. ಕೇಂದ್ರೀಯ ಅಕ್ಕಿ ಸಂಶೋಧನ ಸಂಸ್ಥೆಯೊಂದು ಇಲ್ಲಿ ಸ್ಥಾಪಿತವಾಗಿದೆ. ಒರಿಸ್ಸದ ಉಚ್ಚನ್ಯಾಯಾಲಯವಿರುವುದು ಈ ನಗರದಲ್ಲೇ.

ಕಟಕ್ ಅನೇಕ ಗುಡಿಸಲು ಕೈಗಾರಿಕೆಗಳ ಕೇಂದ್ರ. ಚಿನ್ನ ಬೆಳ್ಳಿಯ ತೆರಪು ಚಿತ್ರ ಕಲೆಯೂ ಕೊಂಬಿನ ಕುಶಲ ಕಲೆಯೂ ಮುಖ್ಯ. ಜವಳಿ ಗಿರಣಿಯೂ ಕಾಗದ, ಉಕ್ಕಿನ ಕೊಳವೆ ಮತ್ತು ಗಾಜಿನ ಕಾರ್ಖಾನೆಗಳೂ ಆಧುನಿಕ ಉದ್ಯಮಗಳೂ, ಒರಿಸ್ಸದ ನಾನಾಭಾಗಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಪಡೆದಿರುವ ಕಟಕ್ ಒಂದು ಮುಖ್ಯ ವಾಣಿಜ್ಯ ಕೇಂದ್ರ. 	                                  (ಆರ್.ಪಿ.ಎಸ್.)

ಬ್ರಾಹ್ಮಣೀ ಮತ್ತು ಮಹಾನದಿಗಳ ಮುಖಜಭೂಮಿಯನ್ನೂ ಹಿಂಬದಿಯ ಬೆಟ್ಟದ ನೆಲವನ್ನೂ ಒಳಗೊಂಡಿರುವ ಕಟಕ್ ಜಿಲ್ಲೆಯ ವಿಸ್ತೀರ್ಣ 10,846 ಚ.ಕಿಮೀ ಜನಸಂಖ್ಯೆ 23,41,984 (2001). ಈ ಜಿಲ್ಲೆಯ ಜನಸಾಂದ್ರತೆ ಪ್ರತಿ ಚಕಿಮೀಗೆ 596 ಜನರು. 

ಕಟಕ್ ಜಿಲ್ಲೆಯಲ್ಲಿ ಮೂರು ಸ್ವಾಭಾವಿಕ ವಿಭಾಗಗಳಿವೆ. ಪುರ್ವದಲ್ಲಿ 5-50 ಕಿಮೀವರೆಗೆ ಅಗಲವಾಗಿರುವ ಕಡಲಂಚು ಜೌಗು ನೆಲ ಲವಣಮಯ, ಇದರ ಪಶ್ಚಿಮಕ್ಕೆ ಸು. 64 ಚಕಿಮೀ ಅಗಲದ, ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಮೈದಾನವಿದೆ. ಇಲ್ಲಿ ಒಳ್ಳೆಯ ನೀರಾವರಿ ವ್ಯವಸ್ಥೆಯಿದೆ. ಎತ್ತರದ ಪ್ರದೇಶದಲ್ಲಿ ಪುರ್ವದಿಂದ ಪಶ್ಚಿಮಕ್ಕೆ ಹಬ್ಬಿರುವ ಹಲವು ಬೆಟ್ಟಗಳಿವೆ. ಇವುಗಳ ಮೈ ವೃಕ್ಷ ಪುರಿತ, ನಡುವೆ ಕಣಿವೆಗಳಿವೆ. ವೈತರಣೀನದಿ ಇದರ ಉತ್ತರದ ಗಡಿ. ಬತ್ತ ಮತ್ತು ದ್ವಿದಳ ಧಾನ್ಯ, ಸೆಣಬು ಈ ಜಿಲ್ಲೆಯ ಮುಖ್ಯ ಬೆಳೆ.

ವೈತರಣಿಯ ದಡದ ಮೇಲಿರುವ ಜಾರ್ಜ್ಪುರ ಮುಖ್ಯ ಯಾತ್ರಾಸ್ಥಳ, ಮಹಾಭಾರತದಲ್ಲೂ ಇದರ ಉಲ್ಲೇಖವಿದೆ. ಇದು ಅನೇಕ ರಾಜಮನೆತನಗಳ ರಾಜಧಾನಿಯಾಗಿತ್ತು. ಬೋಧಿಸತ್ತ್ವ ಮತ್ತು ಮಾತೃಕೆಯರ ಪ್ರತಿಮೆಗಳೂ 10 ಮೀ ಎತ್ತರದ ಷೋಡಶಮುಖಿ ಶಿಲಾಸ್ತಂಭವೂ 
ಪ್ರಾಚೀನಸ್ಮಾರಕಗಳಲ್ಲಿ ಮುಖ್ಯವಾದವು. 1656ರಲ್ಲಿ ನವಾಬ್ ಅಬು ನಾಸಿರ್ಖಾನ್ ನಿರ್ಮಿಸಿದ ಮಸೀದಿಯೊಂದು ಇಲ್ಲಿದೆ. ಈ ಜಿಲ್ಲೆಯ ದಕ್ಷಿಣಭಾಗದಲ್ಲಿರುವ ಉದಯಗಿರಿ, ಲಲಿತಗಿರಿ ಮತ್ತು ರತ್ನಗಿರಿ ಬೆಟ್ಟಗಳಲ್ಲಿ ಪ್ರಾಚೀನ ಬೌದ್ಧ ಮಂದಿರಗಳಿವೆ. (ನೋಡಿ- ಒರಿಸ್ಸ)         

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ